ಕೀರ್ಕೆಗಾರ್ಡ್, ಸೋರೆನ್ ಆಬ್ಯೆ

  1813-1855. ಡೇನಿಷ್ ತತ್ತ್ವಜ್ಞಾನಿ. ಧರ್ಮಜಿಜ್ಞಾಸು ಮತ್ತು ಲೇಖಕ. ಹುಟ್ಟಿದ್ದು ಡೆನ್ಮಾರ್ಕಿನ ಕೊಪನ್‍ಹೇಗನ್‍ನಲ್ಲಿ. ತಂದೆ ಮೈಕೇಲ್‍ನ ಏಳನೆಯ ಹಾಗೂ ಕೊನೆಯ ಮಗ. ಈತನ ಜೀವಿತದ ಮೇಲೆ ತಂದೆಯ ಪ್ರಭಾವ ಅನೇಕ ರೀತಿಯಲ್ಲಿ ಆಗಿದೆ. ವಂಶಪಾರಂಪರ್ಯವಾಗಿ ಬಂದ ಧಾರ್ಮಿಕ ಪ್ರಜ್ಞೆ, ತರ್ಕಶಾಸ್ತ್ರ ಬಗೆಗಿನ ವಿವೇಚನೆ. ಧಾರ್ಮಿಕ ಜೀವನಕ್ಕೆ ಬೇಕಾದ ಅಗತ್ಯ- ಇವೆಲ್ಲವನ್ನೂ ಕೀರ್ಕೆಗಾರ್ಡ್ ತಂದೆಯಿಂದ ಪಡೆದ. ಈತನ ಮೇಲೆ ತಾಯಿ ಅನ್ನೆ ಲುಂಡಳ ಪ್ರಭಾವ ಅತ್ಯಲ್ಪ . ಬಾಲ್ಯದಲ್ಲಿ ಯಾವ ಏರಿಳಿತಗಳನ್ನೂ ಕಾಣದೆ ಬೆಳೆದ ಈತ 1821ರಲ್ಲಿ ಗ್ರಾಮರ್ ಸ್ಕೂಲಿಗೆ ದಾಖಲಾದ. 1830ರಲ್ಲಿ ಮೆಟ್ರಿಕ್ ಪಾಸು ಮಾಡಿದ. 1837ರಲ್ಲಿ ಲ್ಯಾಟಿನ್ ಕಲಿತ. 1838ರಲ್ಲಿ ತನ್ನ ತಂದೆಯ ಸಾವಿನಿಂದ ಬಹುವಾಗಿ ನೊಂದ. ಅಲ್ಲಿಗೇ ಅವನ ವಿದ್ಯಾಭ್ಯಾಸ ನಿಂತಿತು. 1840ರಲ್ಲಿ ಕೊಪನ್‍ಹೇಗನ್ ವಿಶ್ವವಿದ್ಯಾನಿಲಯದಲ್ಲಿ ವೇದಾಂತ ವಿಷಯದಲ್ಲಿ ಪದವಿ ಪಡೆದ. ದಿ ಕಾನ್ಸೆಪ್ಟ್ ಆಫ್ ಐರನಿ ಎಂಬ ಪ್ರಬಂಧ ಬರೆದು ಎಂ.ಎ. ಪದವಿ ಪಡೆದ. ಆ ಗ್ರಂಥ 1841ರಲ್ಲಿ ಪ್ರಕಟಗೊಂಡಿತು. ಅನಂತರ ಎರಡು ವರ್ಷಗಳ ಕಾಲ ಜರ್ಮನಿಯಲ್ಲಿ ಸುತ್ತಾಡಿದ. 1843ರಲ್ಲಿ ಪ್ರಕಟಿಸಿದ ಐದರ್-ಆರ್, ರೆಪಿಟಿಷನ್, ಫಿಯರ್ ಅಂಡ್ ವ್ರೆಂಬ್ಲಿಂಗ್ ಎಂಬ ಗ್ರಂಥಗಳ ಪ್ರಕಟಣೆಯಿಂದ ದೊಡ್ಡ ತತ್ತ್ವಜ್ಞಾನಿಯೆಂಬ ಖ್ಯಾತಿ ಪಡೆದ. 1845ರಲ್ಲಿ ಸ್ಟೇಜಸ್ ಆನ್ ಲೈಫ್ಸ್ ವೇ ಮತ್ತು ಇತರ ಕೆಲವು ಗ್ರಂಥಗಳನ್ನು ಪ್ರಕಟಿಸಿದ. ಅವುಗಳಲ್ಲಿ ಕ್ರೈಸ್ತಧರ್ಮದ ಮೂಲಭೂತ ತತ್ತ್ವಗಳನ್ನು ಚರ್ಚಿಸಿದ್ದ, ಮಾನವನ ನಿಯಮಿತ ಜೀವನಕ್ಕೆ ಬೇಕಾದ ಸೌಂದರ್ಯ ತತ್ತ್ವಗಳನ್ನು ತಿಳಿಸಿದ್ದ, ಮನುಷ್ಯ ತನ್ನಲ್ಲಿಯೇ ತಾನು ಸತ್ಯವನ್ನು ಕಂಡುಕೊಳ್ಳಬೇಕೆಂದು ವಿವರಿಸಿದ. ಅನಂತರ ಡೇನಿನ ನ್ಯಾಷನಲ್ ಚರ್ಚಿನ ವಿರುದ್ಧ ಹೋರಾಟ ನಡೆಸಿದ. ಇದರಿಂದಾಗಿ ಈತನನ್ನು ಕ್ರೈಸ್ತ ಅಸ್ತಿತ್ವವಾದಿಗಳ ಗುಂಪಿಗೆ ಸೇರಿಸಲಾಯಿತು. 1846ರಿಂದ 1848ರ ವರೆಗೆ ಕನ್‍ಕ್ಲೂಡಿಂಗ್ ಆನ್ ಸೈಂಟಿಫಿಕ್ ಪೋಸ್ಟ್ ಸ್ಕ್ರಿಪ್ಟ್, ದಿ ಸಿಕ್‍ನೆಸ್ ಅನ್ ಟು ಡೆತ್, ಟ್ರೈನಿಂಗ್ ಇನ್ ಕ್ರಿಶ್ಚಿಯಾನಿಟಿ, ಫಾರ್ ಸೆಲ್ಫ್-ಎಕ್ಸಾಮಿನೇಷನ್, ಜಜ್ ಫಾರ್ ಯುವರ್ ಸೆಲ್ವ್ಸ್ ಮುಂತಾದ ಧಾರ್ಮಿಕ ಗ್ರಂಥಗಳನ್ನು ರಚಿಸಿದ. 1855ರಲ್ಲಿ ಆರ್ಥಿಕ ದೃಷ್ಟಿಯಿಂದ ಬಹಳ ದುಃಸ್ಥಿತಿಯಲ್ಲಿದ್ದ. ಅದೇ ವರ್ಷ ನವೆಂಬರ್ ತಿಂಗಳಲ್ಲಿ ಕೊಪಹೇಗನ್‍ನಲ್ಲಿ ಸತ್ತ. 

 ಕೀರ್ಕೆಗಾರ್ಡ್ ಯಾವೊಂದು ಪಂಥವನ್ನಾಗಲಿ ಅಥವಾ ಶಿಷ್ಯಸಮೂಹವನ್ನಾಗಲಿ ಬಿಟ್ಟುಹೋಗಲ್ಲಿಲ್ಲ. ಅವನ ಎಲ್ಲ ಪುಸ್ತಕಗಳು ಕ್ರೈಸ್ತಧರ್ಮದ ಅರಿವಿಗೆ ದಾರಿ ಮಾಡಿಕೊಡುತ್ತವೆ. ಅವು ಮಾನವನ ಆಲೋಚನಾ ಶಕ್ತಿಯನ್ನು, ಸೌಂದರ್ಯ ಪ್ರಜ್ಞೆಯನ್ನು, ಪ್ರತಿಯೊಬ್ಬನೂ ತನ್ನ ಕಾಲಮೇಲೆ ನಿಲ್ಲಲು ಬೇಕಾದ ನೈತಿಕ ಜೀವನವನ್ನು ಬೋಧಿಸುತ್ತವೆ. ಹೆನ್ರಿಕ್ ಇಬ್ಸನ್, ಅಂಟೊನ್ ಜೆಕಾಫ್ ಮೊದಲಾದವರು ಈತನ ತತ್ತ್ವಗಳನ್ನು ಬಹಳವಾಗಿ ಮೆಚ್ಚಿದವರು. ಮೊದಲು ಮಹಾಯುದ್ಧದ ಅನಂತರ ಕೀರ್ಕೆಗಾರ್ಡ್‍ನ ತತ್ತ್ವಗಳಿಂದ ಪ್ರಾಟೆಸ್ಟಂಟ್ ಮತ ಪುನರಜ್ಜೀವನಗೊಂಡಿತು. ಈ ಎರಡು ಮಹಾಯುದ್ಧಗಳ ನಡುವೆ ಜರ್ಮನಿ ಮತ್ತು ಫ್ರಾನ್ಸ್ ದೇಶಗಳಲ್ಲಿ ಹೊಸದೊಂದು ತತ್ತ್ವ ಹುಟ್ಟಿತು. ಅದೇ ಅಸ್ತಿತ್ವವಾದ. ಈ ವಾದ ಬಹುಮಟ್ಟಿಗೂ ಕೀರ್ಕೆಗಾರ್ಡ್‍ನ ತತ್ತ್ವಗಳಿಂದ ಅಸ್ತಿತ್ವಕ್ಕೆ ಬಂದುದು.     (ನೋಡಿ- ಅಸ್ತಿತ್ವವಾದ)  

        *